ಪೋಸ್ಟ್‌ಗಳು

ಉಗಾದಿ

ಇಮೇಜ್
  🔊 Click here and listen to audio recitation ಚಂದ್ರನಡಿಗೆ ನಮ್ಮ ನಡಿಗೆ ಇದು ಶುಕ್ಲ ಕೃಷ್ಣ ತಾಳಕೆ। ಋುತುಚಕ್ರವು ಉರಳಿತು ತಂದಿತು ಉಗಾದಿಯು॥ ಮಾಗಿ ಮಾಗಿ, ಗ್ರೀಶ್ಮ ಬಂದು ತರುಲತೆಗೆ ಶೋಭೆ ತಂದು। ಮಾವು, ಬೇವು ಬೇರೆನ್ನದೆಯೆ ಎಲ್ಲದಕ್ಕು ಹಸಿರನುಡಿಸಿ, ಋುತುಚಕ್ರವು ಉರಳಿತು ತಂದಿತು ಉಗಾದಿಯು॥ ಎಳೆಯ ಹಸಿರು ಹೊಸೆದುಸಿರು ಕೋಗಿಲೆಗೂ ಗಾನ ಹುರುಪು। ಮಾವಿನಡಿಯ ನೆರಳಿನಲ್ಲಿ ಪಂಚಮದಲಿ ಹಾಡಿದೆ, ಋುತುಚಕ್ರವು ಉರಳಿತು ತಂದಿತು ಉಗಾದಿಯು॥ ಸಿಹಿ ಕಹಿಯು ಜಿಹ್ವ ಸತ್ಯ ಕಷ್ಟ ಸುಖವು ಅನುಭವದ ಸತ್ಯ। ಮರಮರಳಿ ಸುತ್ತ ಸುತ್ತಿ ಮಾಯೆ, ಸತ್ಯಗಳನು ಕದಡಿ ಜಾಣ ಮತ್ತೆ ಪೇಳಿದ ಋುತುಚಕ್ರವು ಉರಳಲಿ ಬರಲಿ ಮತ್ತೆ ಉಗಾದಿಯು॥ - ನಾ ಶ್ರೀ ಮೋ

ಕಾಲ

ಇಮೇಜ್
  ಕಾಲಾನಂತ ಎಂದು ಅದಕೆ  ಇಲ್ಲ ಆದಿ ಅಂತ್ಯವು| ಆದಿ ಅಂತ್ಯವಿರದ ಕಾಲ ಎಂದು ಸತ್ಯವು| ಕಾಲ ಸತ್ಯ ಇಂದಿಗಿಂದು  ಕಾಲ ಬಹಳ ಕ್ಷಣಿಕವು| ಕ್ಷಣದ ಕಾಲ ಕಳೆದು ಹೋಗೆ  ಬೊಗಸೆ ನೀರಿನಂದದಿ| ಹಿಡಿಯ ಹೋದೆ ಜಾರಿ ಹೋಯ್ತು  ನನ್ನ ಬೆರಳ ಸಂದಲಿ॥ ಮರಳಿ ಕೈಯನದ್ದಿ ಹಿಡಿದೆ ಮತ್ತೆ ಬೊಗಸೆ ನೀರನು| ತಿಳಿತಿಳಿದೂ ನೀರು ನುಸುಳಿ ಹೋಗುವುದದು ಕ್ಷಣದಲಿ| ಕ್ಷಣಿಕ ನೀರ ಹಿಡಿಯುವಾಸೆ, ಹಿಡಿದ ನೀರ ಕುಡಿಯುವಾಸೆ| ತಣಿಸುವುದು ಒಣ ಕಂಠವ ತೃಪ್ತನಾದೆ, ನಿರ್ಲಿಪ್ತನಾದೆ ಮಾಯವಾದ ನೀರ ನೋಡೆ ತಿಳಿದೆ ಜಾಣ ಸತ್ಯವ॥ - ನಾ ಶ್ರೀ ಮೋ

ಮರ

ಇಮೇಜ್
  Click here for audio recitation 🔊 🔊 Click here for Music Video of this song ಮರವಾಗಿ ಇರಬೇಕು ನಾನು ಈ ಧರೆಯೊಳಗೆ ಚಂದದ ತರುವಿನಿಂ ಜೀವನದ ಅರಿವಾಗೆ ಮರವಾಗಿರ ಬೇಕು ನಾನು ಈ ಧರೆಯೊಳಗೆ॥ ಆಳ ಆಳಕೆ ಹೊಕ್ಕಿ ಧರಣಿಯೊಳು ಧೃಡವಾಗಿ ಹರಡಿ ಈ ಭುವಿಯೊಳಗೆ ಭದ್ರ ಬುನಾದಿಯೆನಿಪ। ಬಲು ಹಳೆಯ ಕಾಣದಾ ಬೇರನು ನಾ ಹೊಂದಿ  ಮರವಾಗಿರಬೇಕು ನಾನು ಈ  ಧರೆಯೊಳಗೆ॥ ಮೇಲ್ಮೇಲಕೆ ಏರಿ ಗಗನದಲಿ ವಿಸ್ತರಿಸಿ ಚಾಮರದಂತೆ ಚಾಚಿ ದಿಕ್ಕುಗಳ ದಿಕ್ಕರಿಪ। ಹಚ್ಚ ಪಚ್ಚೆಯ ಹುರುಪ ತೋರುವ ಮರವಾಗಿರಬೇಕು ನಾನು ಈ  ಧರೆಯೊಳಗೆ॥ ಥಕ ಥೈಯೆಂದು ತಂಗಾಳಿಯಲಿ ನೃತ್ಯವನಾಡಿ ಬಿರುಗಾಳಿಯಲಿ ಧೃತಿಗೆಡದೆ ಛಲದಿನಿಂತಿರ್ಪ। ಸದೃಡ ಸಶಕ್ತ ಕೊಂಬೆ ಕಾಂಡಗಳ ಬಲದಲ್ಲಿ ಮರವಾಗಿರಬೇಕು ನಾನು ಈ  ಧರೆಯೊಳಗೆ॥ ಚಿಲಿ ಪಿಲಿ ಹಕ್ಕಿಗಳ ಗೂಡಿಗಾಶ್ರಯವಾಗಿ ಹರಡಿ ಛಾಯೆಯ ಚೆಲ್ಲಿ ಪಯಣಿಗಗೆ ತಣಿಪ। ದಾರಿಯಲಿ ಗುರುತಾಗಿ ಸುತ್ತ ಕಟ್ಟೆಯನಿಟ್ಟ ಮರವಾಗಿರ ಬೇಕು ನಾನು ಈ  ಧರೆಯೊಳಗೆ॥ ಮುದದಿ ಒಂದು ದಿನ ಮುಂದೊಮ್ಮೆ ಮುದಿಯಾಗಿ ಹೇಗಾದರೂ ಸರಿಯೆ ಇತರರಿಗೆ ಆಸೆಯ ಮಣಿಪ। ಒಲೆ ಉರುವಲು ಆಗಿ, ಮನೆಯ ಪೀಠೋಪಕರಣವೆಯಾಗಿ ಮರವಾಗಿರಬೇಕಿತ್ತು ಜಾಣ ಈ  ಧರೆಯೊಳಗೆ॥

ಗುರು

ಇಮೇಜ್
  ತಿಳಿಯದ ತಿಳಿಸಿ ಪೇಳ್ದವನೇನ್ ಗುರುವು? ತಿಳಿದಿಲ್ಲವೆಂಬುದನೆ ತಾನರಿಯದವ - ಅವ ಕೇಳ್ದವಗೆ ಉತ್ತರವ ಕೊಟ್ಟವನೇನ್ ಗುರುವು? ಉತ್ತರವ ಹುಡುಕಿಸುವವನೆ ನಿಜದಿ ಗುರುವು॥ ತಿಳಿದಿಲ್ಲದವ ತಿಳಿವಿಲ್ಲವೆಂತಿಳಿಯದವ ತಿಳಿಹೇಳೆ ಗೋರ್ಕಲ್ಲ ಮೇಲ್ಮಳೆ ಸುರಿದಂತೆ। ತಿಳಿದಿಲ್ಲದವ ತಾ ತಿಳಿದಿಲ್ಲೆಂದರಿತು ಕೇಳೆ ತಿಳಿ ಹೇಳೆ ಸಾರ್ಥಕವು ತಿಳಿಯದವಗೆ॥ ತಿಳಿದು ತಿಳಿಯದಂತೆ ನಿದ್ರಿಸಿದವಗೆ ಎಬ್ಬಿಸಿ ತಿಳಿಯಾಗಿಸುವವ ಗುರುವು। ತಿಳಿದು ತಿಳಿದಿರುವುದನರಿತವಗೆ ಶರಣು ಅವನೆ ನಿಜದಿ ಗುರುವು ತಿಳಿಯೊ ಜಾಣ॥

ಮರಳಿತೋ ಯುಗಾದಿ

ಇಮೇಜ್
  Click here for audio recitation 🔊 ಹಳೆಯ ಹಳಿತ ಕಹಿಯ ನೆನಪು, ಹೊಸ ಹೊಸೆದ ಸಿಹಿಯ ಹುರುಪು ತಂದಿತು ಯುಗಾದಿಯು। ಉರುಳಿ ಕಾಲ ಸತತವಾಗಿ ಮರಳಿತೋ ಯುಗಾದಿಯು॥ ಹಿಂದೆ ತಿರುಗಿ, ಕಳೆದ ನೆನೆದು ಕಲಿತಲ್ಲಿ ಪಾಠವು। ಮುಂದಿನಕೆ ಸಿದ್ದ ಮಾಡಿ ಬಿಚ್ಚಿಟ್ಟ ಗಾಠವು।  ಉರುಳಿ ಕಾಲ ಸತತವಾಗಿ ಮರಳಿತೋ ಯುಗಾದಿಯು॥ ಕಹಿಯನುಂಡು ಸಿಹಿಯ ಸವೆದ ಸಂಯಮದ ಆಟವು। ಮಾವು ಸೇರಿ ಹುಳಿಯನುಂಡ ಜೀವನದ ಪಾಠವು। ಉರುಳಿ ಕಾಲ ಸತತವಾಗಿ ಮರಳಿತೋ ಯುಗಾದಿಯು॥ ಯೋಜನೆಗಳ ಯೋಚನೆಗಳ ಪಟ್ಟಿ ಸಾಲು ಸಾಲಿಗೆ। ಕಾಲಕೆಲ್ಲ ಕಾಲ ಹಾಕಿ ನಡೆವ  ಋುತುಚಕ್ರಕೆ। ಉರುಳಿ ಕಾಲ ಸತತವಾಗಿ ಮರಳಿತೋ ಯುಗಾದಿಯು॥ ಗ್ರಹದ ಗತಿಯನರಿಯಲಾರೆ ಗಿತಿಸುವುದು ಕಾಲ ಖಚಿತವು ಶರಣು ಹೋದೆ ಕಾಲನಡಿಗೆ ಹಸನ ಕಂಡೆ ತುಳಿತದಿಂದ ಉರುಳಿ ಕಾಲ ಸತತವಾಗಿ ಮರಳಿತೋ ಯುಗಾದಿಯು॥

ಸಮಯದ ಯಂತ್ರ

ಇಮೇಜ್
    Click here for audio recitation 🔊 ಕಾಲದೊಳು ಮುನ್ನುಗ್ಗಿ  ಹಿಗ್ಗಿ   ಮುಂದೇನಾಗುವುದದನಾನರಿಯೆ| ಅದಾವ ಯಂತ್ರ, ತಂತ್ರಕೆ ಮಣಿದು  ಏನ ತಿಳಿಸುವುದೊ ನಾ ತಿಳಿಯೆ| ಕಾಲದ ಬಿಲದಲಿ ನುಗ್ಗಿ  ಹಿಂತಿರುಗಿ  ನಡೆದ ಕೆಲ ಘಟನಾವಳಿಯ ನಾನರಸಿ| ನೋಡಿದೆ ಹಲ ಉಲ್ಲಾಸ ಫಟನೆಗಳ  ಕೆಲ ಮರೆತ ಕಹಿ ಸತ್ಯಗಳ॥ ಪಶ್ಚಾತ್ತಾಪ, ಧನ್ಯತೆ, ಉದ್ವೇಗ,  ನಗೆ, ಜಿಗುಪ್ಸೆ, ಕೋಪಗಳ| ಹೀಗೆ ಹತ್ತಾರು ಮಾನಸಿಕ  ಅಂತರಾತ್ಮ ಅನುಭವವು| ಗತಿಸಿದಕೇನು ಚಿಂತೆ ಚಿತೆಯೇರಿತಲ್ಲ ಕಾಲಾಗ್ನಿಯಲಿ| ಮತ್ತೇಕೆ ಆ ಭೂತಗಳು  ಕಾಡುತಿವೆ ನನ್ನನ್ನಿಂದು? ಹಿಂದಿನದಿಂ ಪಾಠ ಕಲಿಯುವಾಸೆ,  ತಪ್ಪ ಸರಿಪಡಿಸುವಾಸೆ। ಚಿಕ್ಕವನಾಗುವಾಸೆ, ಅಮ್ಮನ  ತೊಡೆಯಮೇಲ್ಮಲಗುವಾಸೆ॥ ಗಳೆಯನೊಂದಿಗೆ ಓಡುವಾಸೆ,  ಶಾಲೆಗಗೆ ಹೋಗುವಾಸೆ ಕೈಗೂಡದಾಸೆಗಳ ನೆನಪಿನಂಗಳದಿ  ನಾನಿಂದು  ಹೊರ ಓಡಿ ಬಂದೆ॥ ಕಂಡೆ ನನ್ನ ಕಾಲ ಯಂತ್ರವ  ಬಲು ಹಳೆಯ ಗೆಳೆಯನಲಿ। ಕೊಂಡೊಯ್ದ ಯೋವನದ  ನಮ್ಮಾ ಹಿಂದಿನ ಕಾಲದಲಿ। ವಿಹರಿಸಿ ಬಂದೆವು ಇಂದಿಗೆ  ಮರುಕಳಿಸಿ ಜೊತೆಯಲ್ಲಿ ಮುಂದೊಂದು ದಿನ ಇಂದಿನ  ದಿನವ ಮೆಲಕುವವ ಜಾಣ॥ - ನಾ ಶ್ರೀ ಮೋ

ಪಯಣ

ಇಮೇಜ್
  Click here for audio recitation 🔊 ಕಾಣದ ಜಾಗವ ಕಾಣ ಹೊರಟಿರುವೆ ಕಂಡರಿತ ಈ ಸ್ಥಳವ ನಾನು ತೊರೆದು। ಕಾಣಬೇಕೇನದನು ಯಾಕೀ ಹಟ ತಿಳಿಯೆ ಸಾಧಿಸುವುದಾದರೇನದರ ಫಲವು॥ ಹಿತ್ತಿಲಿನಾ ಮುದಿ ಮರವ ನೋಡಿ ಕಲಿತೆನು ನಾನು ಜಡದಿ ನಿಂತಿಹುದೇನು ಅಲ್ಲೆ ತೊಯ್ದಾಡದೆ? ಬೇರ ನೂಕಿಹ ತಾನು ಪಾತಾಳವರಸುತ್ತ ಮೇಲ್ಮೇಲೆ ನಡೆದಿಹನು ದೂರ ಬಾನಿನತ್ತ॥ ನಿಂತಿಹುದೇನು ನೀರು ತಾ ನಿಶ್ಚಲದಿ ಮಡುವಾಗಿ ಜಿಗಿದು ಮುನ್ನುಗ್ಗಿಹುದು ಮುಂದೆ ನಡೆಯೆನ್ನುತ। ಕಣಿವೆ ಜಲಪಾತ ತಾ ಹರಿವ ಪಥದೇನರಿವು? ಧೈರ್ಯದಲಿ ಸಾಗುತಿಹಳು ತಾ ನದಿಯೆನ್ನುತ॥ ಹಕ್ಕಿಯದು ಹಾರುತಿದೆ ತನ್ನ ಗೂಡನು ತೊರೆದು ರೆಕ್ಕೆಯ ಬಲವಲ್ಲವದು ತನ್ನಾತ್ಮ ವಿಶ್ವಾಸ। ಜೊತೆಯಲ್ಲೊ ಒಮ್ಮೊಮ್ಮೆ ಒಬ್ಬೊಂಟಿಗನಾಗಿ ಹಾರುವಾ ಹಕ್ಕಿಯಿಂಪಾಠ ನಾನು ಕಲಿತೆ॥ ಕಾಣದಕೆ ಹುಡುಕುವುದು, ಅರಿಯದನರಸುವುದು ಹುಚ್ಚಲ್ಲ, ಹಠವಲ್ಲ ಆ ಗುರಿಯ ಕಾಣೋ। ಒಳ ಹೊರಗಿನ ಈ ಇಡಿಯ ಬ್ರಹ್ಮಾಂಡದಲಿ  ಕಾಣದಕೆ ಹವಣಿಸಿದವ ನಿಜ ಜಾಣನೋ॥ - ನಾ ಶ್ರೀ ಮೋ