ಪಯಣ
ಕಾಣದ ಜಾಗವ ಕಾಣ ಹೊರಟಿರುವೆ
ಕಂಡರಿತ ಈ ಸ್ಥಳವ ನಾನು ತೊರೆದು|
ಕಾಣಬೇಕೇನದನು ಯಾಕೀ ಹಟ ತಿಳಿಯೆ
ಸಾಧಿಸುವುದಾದರೇನದರ ಫಲವು?
ಹಿತ್ತಿಲಿನಾ ಮುದಿ ಮರವ ನೋಡಿ ಕಲಿತೆನು ನಾನು
ಜಢದಿ ನಿಂತಿಹುದೇನು ಅಲ್ಲೆ ತೊಯ್ದಾಡದೆ?
ಬೇರ ನೂಕಿಹ ತಾನು ಪಾತಾಳವರಸುತ್ತ
ಮೇಲ್ಮೇಲೆ ನಡೆದಿಹನು ಬಾನಿನತ್ತ॥
ನಿಂತಿಹುದೇನು ನೀರು ತಾ ನಿಸ್ಚಲದಿ ಮಡುವಾಗಿ
ಜಿಗಿದು ಮುನ್ನುಗ್ಗಿಹುದು ಮುಂದೆ ನಡೆಯೆನ್ನುತ।
ಕಣಿವೆ ಜಲಪಾತ ತಾ ಹರಿವ ಪಥದೇನರಿವು?
ಧೈರ್ಯದಲಿ ಸಾಗುತಿಹಳು ತಾ ನದಿಯೆನ್ನುತ॥
ಹಕ್ಕಿಯದು ಹಾರುತಿದೆ ತನ್ನ ಗೂಡನು ತೊರೆದು
ರಕ್ಕೆಯ ಬಲವಲ್ಲವದು ಆತ್ಮ ವಿಶ್ವಾಸ।
ಜೊತೆಯಲ್ಲೊ ಒಮ್ಮೊಮ್ಮೆ ಒಬ್ಬೊಂಟಿಗನಾಗಿ
ಹಾರುವಾ ಹಕ್ಕಿಯಿಂಪಾಠ ನಾನು ಕಲಿತೆ॥
ಕಾಣದಕೆ ಹುಡುಕುವುದು, ಅರಿಯದನರಸುವುದು
ಹುಚ್ಚಲ್ಲ, ಹಠವಲ್ಲ ಅಲ್ಲೇ ಗುರಿಯ ಕಾಣೋ।
ಒಳ ಹೊರಗಿನ ಈ ಇಡಿಯ ಬ್ರಹ್ಮಾಂಡದಲಿ
ಕಾಣದಕೆ ಹವಣಿಸಿದವನೆ ನಿಜ ಜಾಣನವನೋ॥
- ನಾ ಶ್ರೀ ಮೋ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ