ಪೋಸ್ಟ್‌ಗಳು

ತಾಳ್ಮೆ

ಇಮೇಜ್
🔊Click here for audio recitation    ನಲ್ಮೆಯಾ ಒಲವಿಗೆ  ಇರಲಿ ತಾಳ್ಮೆ ಅವಸರದ ಸರಸವದು  ಎಂದು ಸಲ್ಲ। ನಲ್ಮೆಯಾ ಒಲವಿಗೆ ಇರಲಿ ತಾಳ್ಮೆ॥ ಮೊಗ್ಗು ಹೂವಾಗುವುದು  ಅರಳಿ ಪರಿಮಳ ಬೀರಿ। ದುಂಬಿಯ ಚುಂಬನಕೆ ತಾನು ಇರೆ ಕಾತುರ॥ ನಲ್ಮೆಯಾ ಒಲವಿಗೆ  ಇರಲಿ ತಾಳ್ಮೆ ಬಾಯಾರಿ ತಳೆದಿಹಳು ಬಹುದಿ ಕಾತುರದಿಂದ। ಬರಿದ ಬಸುರಾಗಿಸಲು ಆ ಭೂ ದೇವಿಯು॥ ನಲ್ಮೆಯಾ ಒಲವಿಗೆ  ಇರಲಿ ತಾಳ್ಮೆ ನಭದಿ ಕಾರ್ಮೋಡಗಳು  ತೆಂಕಣದಿ ತೇಲುತಲಿ। ತಾವೆ ಅರಸುತ್ತ ಬರುವಳು ಅವಳೆಡೆಗೆ॥ ನಲ್ಮೆಯಾ ಒಲವಿಗೆ  ಇರಲಿ ತಾಳ್ಮೆ ಬೀಜದಿಂ ಹೊರಹೊಮ್ಮೆ ಜೀವ ತಾ ತಳೆಯುವುದು। ಮರವಾಗಿ ಹಣ್ಣಿಟ್ಟು ಮರು ಬೀಜ ಕೊಟ್ಟು॥ ನಲ್ಮೆಯಾ ಒಲವಿಗೆ  ಇರಲಿ ತಾಳ್ಮೆ ತಾಳ್ಮೆಯಿರೆ ಜೀವನವು ತಾಳ್ಮೆ ಜೀವದ ಆಳ। ನಲ್ಮೆಯು ಜೀವನವು ತಿಳೆ ಜಾಣನು॥

ಕಿರುಬ - ಕರು - ತಾಯಿ

ಇಮೇಜ್
📹 ಘಟನೆಯ ಚಿತ್ರಿತ ಹಾಡು ಕಿರುಬನ ಬೇಟೆಗೆ ಬಿತ್ತು ಬಲಿಯು ಕಂದಮ್ಮ  ಆರ್ತನಾದವು ಹೊಮ್ಮಿತ್ತು “ ಓ ನನ್ನ ಅಮ್ಮ”।  ಕರುಳ ಕಿವಿಚುವ ನೋಟ ನೋಡೆ ಆ ತಾಯಿ  ಕಂದಂಗೆ ಬಿತ್ತು ಕಿರುಬ ಕೋರೆ ಬಾಯಿ॥ ತಿಳಿದಿದ್ದು ತನಗಾರು ಇಲ್ಲ ಬೆಂಗಾವಲು  ತಾಯಿ ಸ್ವೀಕರಿಸಿದಳು ಸ್ಥಿರದಿ ಸವಾಲು।  ಬಿಡಲಿಲ್ಲ ಸ್ಥಳವ ಮುನ್ನುಗ್ಗಿದಳು ತಾಯಿ  ಹೆದರಿಸಿ ಓಡಿಸಲೆಂದು ಆ ಕ್ರೂರ ಬಾಯಿ॥ ಒಬ್ಬಳೇ ಬಂದಳೆಂದು ಊಟಕ್ಕೆ ಭಂಗ  ವ್ಯಾಘ್ರವರಿತಿತ್ತು ಆ ತಾಯಿಯ ಅಂತರಂಗ।  ಬೇಗ ಹಿಮ್ಮೆಟ್ಟಿ ತಾ ಸರಿದನು ಅವಸರದಿ  ಕಾದಿದ್ದ ತಾಳ್ಮೆಯಿಂದಲಿ ಬರಲಿ ಸರದಿ॥ ಮೂಸಿ ನೋಡಿದಳವಳು ಅದ ಕರುಣೆಯಿಂದ ಪ್ರಾಣ ಹೋಗುತಲಿತ್ತು ಕರು ದೇಹದಿಂದ।  ಹೇಳಲಾಗದ ನೋವ ತಾನು ಅನುಭವಿಸಿ  ಕೂಗ ಹಾಕಿದಳು ಬರಲು ಸ್ನೇಹಿತರ ಕರೆಸಿ॥ ಬಂದವು ಕೆಲ ತನ್ನ ಹಿಂಡು ಓಡೋಓಡಿ  ನುಗ್ಗಿದವು ಧೈರ್ಯದಿ ಮುಂದೆ ಎಲ್ಲ ತಾ ಭರದಿ।  ಕಾಲ ಮಿಂಚಿತ್ತೆಂದು ತೀರಿತ್ತು ಕರುವು  ತೋರಿದನಾ ಜಾಣ ತನ್ನಾಟವ ವಿಧಿಯು॥

ನೌಕೆ - ಪಯಣ

ಇಮೇಜ್
ನಮ್ಮ ಬಾಳ ನೌಕೆಯಲ್ಲಿ ತೇಲಿ ಹೋಗುವ। ದೂರದೊಂದು ಕಡಲ ಕರೆಗೆ ಹಾಯ್ದು ಸಾಗುವ॥ ನಮ್ಮ ಪುಟ್ಟ ನೌಕೆಯಲ್ಲಿ ಹುಟ್ಟು ಹಾಕುವ। ಬಿರುಗಾಳಿಯು ಬೀಸಿದಾಗ ಲಂಗರಿಳಿಸುವ॥ ತೇಲುತಲಿರೆ ಸೌಮ್ಯದಿಂದ ನಮ್ಮ ನೌಕೆಯು। ನೆಮ್ಮದಿಯಲಿ ಶಾಂತವಾಗಿ ಸಮಯ ಕಳೆಯುವ॥ ಶಾಂತ ರೌದ್ರ ಸಾಗರವಿದು ಭಾವ ವಿಧ ವಿಧ । ಸಮಚಿತ್ತದಿ ಎದುರಿಸೋಣ ಎಲ್ಲವೂ ಹದ॥ ಸುತ್ತ ಮುತ್ತ ಕ್ಷಾರವಿದ್ದ ನೀರು ಬಹುವಿದೆ। ಬಾಯಾರಿದ ಬಾಯಿಗಿಂದು ಬೊಗಸೆ ಬೇಕಿದೆ॥ ಬೇರೆಯೊಬ್ಬನಿಹನು ಎಲ್ಲೊ ನಮ್ಮ ಕಾಯುತ। ನಮ್ಮ ಹೊಣೆ, ಅವನೇ ಜಾಣ ಎಂದು ನಮಿಸುವ॥

ಕಮಲ

ಇಮೇಜ್
🔊Click here for audio recitation ತಾವರೆಯು ತಾನಾಗಿಯೇ ಸಂತಸವ ಸೂಸುತ। ಕೆಸರಲಿದ್ದರೇನು ಕೇಡು? ನೋಡು ಬಾನಿನತ್ತ॥ ಮೊಗ್ಗು ನೀನು ಅರಳಬಹುದು ರವಿಯ ನೋಡಿ ಅರಳು। ನೋಡಿದವರಿಗೆಲ್ಲ ನೀನು ಆಹ್ಲಾದವ ತರಲು॥ ಕರಿಯ, ಬರಿಯ ಕೊಳಕು ಕೆಸರು ಬಹಳ ಕೊಳದ ಆಳ। ಹೀರಿ ನೀನು ಅದರ ರಸವ ನಡೆಸು ಚೆಂದ ಬಾಳ॥ ತೇಲಲಿಂದು ನೀರ ಮೇಲೆ ತೋಯದಂತೆ ಎಲೆಯು। ಬಿದ್ದರೇನು ಹನಿಯ ನೀರು ಮುತ್ತಾಗಿಪ ಜಾಣ ಕಲೆಯು॥

ಹಿಮಗಿರಿ

ಇಮೇಜ್
🔊Click here for audio recitation   ಮೇಘಾವೃತ ಕರಿಯ ಗಿರಿಯು ಶುಭ್ರ ಧವಳ - ಹಸನ ಹಿಮವು॥ ಅಚಲ ಬಂಡೆಯ ಬೆಟ್ಟ ತಿಳಿ ಹೊದಿಕೆಯ ಮಂಜು। ಜಾರು ನೀರಿಗೆ ಪ್ರಸವ ಪರಿಸರದ ಪರಿಯು॥ ಎಲ್ಲಿಂದ ಬಂದಿಹಳೊ ಎಲ್ಲಿಯ ನೀರನು ತಂದು। ಎನಿತು ದೂರದಿ ತಾನು ತಂದಿಹಳೊ ಇದ ಮೇಘ? ಬಿದ್ದ ಹಿಮವದ ನೋಡು ಗಿರಿರಾಜನಿಗೆ ಮುಕುಟ। ಘನ ಅಂಬುದಿಂ ಭರಿತ ತೊಯ್ದು ಪಟ್ಟಾಭಿಷಿಕ್ತ॥ ಎಂತಹ ಚಂಚಲೆ ಗಂಗೆ ಮುಡಿಯಲಿರದೇ ತಾನು। ಓಡಿ ಬರುವಳು ಕರಗಿ ಹರಿದಿಳಿದು ತಾ ಜಾರಿ॥ ಯಾವ ತಪವಿದು ಏನೊ ಕದಲದಾ - ಈ ಛಲವು ಜಯಿಸಿ ಸುತ್ತೆಲ್ಲವನು ಗಿರಿ ತಾನು ನಿಂತಿಹನು॥ ಗಿರಿಯ ತಪಸಿಗೆ ಇಂದು ಜಾಣ ಶರಣೆಂದಿಹನು॥

ಕನಸುಗಳು

ಇಮೇಜ್
🔊 Click here for audio recitation 🎵 Click here for song ಬೆಚ್ಚನೆಯ ನಿನ್ನೆಗಳ ಕಂಬಳಿಯ ನಾ ಹೊದ್ದು ಕನಸುಗಳನರಸುವೆನು ಕಣ್ಣ ಮುಚ್ಚಿ॥ ಬಲು ಭಾರದಾ ಕಂಬಳಿಯ ನಾ ಬಿಚ್ಚಿ ಈ ಬಿಸಿಯೊಳು ನಾ ಹೊದ್ದುದೇಕೆ? ಬೆವರುತಿಹೆ ಕನಸಿನೊಳು ಹಿಂದಿನದ ನೆನೆಯುತ್ತ ನಿನ್ನೆಗಳಿಗಿದು ಎಂಥ ಪರಿತಾಪವು? ಬೆಚ್ಚನೆಯ ನಿನ್ನೆಗಳ ಕಂಬಳಿಯ ನಾ ಹೊದ್ದು ಕನಸುಗಳನರಸುವೆನು ಕಣ್ಣ ಮುಚ್ಚಿ॥ ಬಯಲಿನ ಚಳಿಗೆ ಇಂದು ಕಂಬಳಿಯ ಬಯಸಿದೆನು ಮೈಗೆಲ್ಲ ಮುದಕೊಟ್ಟು ಶಾಖವಿತ್ತು। ಹಿಂದೆಗೈದಾ ಸುಕೃತ ಮರಳಿ ನನ್ನನು ಸುತ್ತಿ ಕಾಪಾಡುತಿಹುದೇನು ರಕ್ಷೆಯಿಟ್ಟು? ಬೆಚ್ಚನೆಯ ನಿನ್ನೆಗಳ ಕಂಬಳಿಯ ನಾ ಹೊದ್ದು ಕನಸುಗಳನರಸುವೆನು ಕಣ್ಣ ಮುಚ್ಚಿ॥ ಒಮ್ಮೊಮ್ಮೆ ಬೇಸರವು ಬೇಡೆನಗೆ ಕಂಬಳಿಯು ತಳ್ಳಿದೆನು ಕಂಬಳಿಯನಾಚೆ ನಾನು  ಅದರ ಆಸರೆಯು ಬೇಕೇನು ಇಂದೆನಗೆ ನೋಡುವೆನು ಹೊಸ ಕನಸ ನಾಳೆಗೆಂದು॥ ನಿನ್ನೆಗಳ ಕಂಬಳಿಯು ಬೇಡವಿನ್ನೋ  ಜಾಣ ಹೊಸ ಕನಸುಗಳನರಸುವೆನು ಕಣ್ಣ ತೆರೆದು॥

“ಕಳೆದ” ಸ್ನೇಹ

ಇಮೇಜ್
🔊Click here for audio recitation ಹಿಂದೆ ಕಳೆದ ದಿನವ ನೆನೆದು  ಇಂದು ನನ್ನ ನಾ ಕೇಳಿದೆ –  ಎಂದು ಹೇಗೆ ಕಳೆದು ಹೋಯ್ತು  ಸಂದ ಸ್ನೇಹ ಸಲಿಗೆಯು? ಬಿಚ್ಚಿ ಮನದಿ ಮಾತನಾಡಿ  ಹೃದಯದಾಳದಿಂದ ಬಂದ  ಚಿಕ್ಕ ಮಾತಿಗೆಲ್ಲ ನಕ್ಕ ಎಂದು ಹೇಗೆ ಕಳೆದು ಹೋಯ್ತು  ಸಂದ ಸ್ನೇಹ ಸಲಿಗೆಯು? ಮೌನ ಮುಳ್ಳು ಮನವ ಚುಚ್ಚಿ  ಸಿಹಿಯ ಬಿಟ್ಟು ಕಹಿಯನುಂಡು  ಎರಡು ದಡದಿ ನಿಂತು ನಾವು  ನಡುವೆ ಕಾಲ ನದಿಯು ಹರಿದು  ಎಂದು ಹೇಗೆ ಕಳೆದು ಹೋಯ್ತು  ಸಂದ ಸ್ನೇಹ ಸಲಿಗೆಯು? ತಿಳಿಯಲಿಲ್ಲ ಅರಿಯಲಿಲ್ಲ  ಎಂದು ಸಂದು ಬಿರುಕು ಬಿಟ್ಟು  ಬಿರುಕು ಇಂದು ಕಣಿವೆಯಾಗಿ  ಇತ್ತ ನಾನು, ಅತ್ತ ನೀನು  ಎಂದು ಹೇಗೆ ಕಳೆದು ಹೋಯ್ತು  ಸಂದ ಸ್ನೇಹ ಸಲಿಗೆಯು? ನನ್ನ ಬೆಟ್ಟದಲ್ಲಿ ನಾನು  ನಿನ್ನ ಬೆಟ್ಟದಲ್ಲಿ ನೀನು  ದೂರ ನೋಟದಲ್ಲಿ ಕಂಡು  ಕೂಗಿಗೆಲ್ಲ ಪ್ರತಿಧ್ವನಿಯು  ಎಂದು ಹೇಗೆ ಕಳೆದು ಹೋಯ್ತು  ಸಂದ ಸ್ನೇಹ ಸಲಿಗೆಯು? ಮರೆಯಲಿಲ್ಲ ಗೆಳೆಯ ನಿನ್ನ  ನನ್ನ ನೀನೂ ಮರೆತೇ ಇಲ್ಲ  ನನಗೂ ನಿನಗೂ ಬಿಡುವೇ ಇಲ್ಲ ಎಂದು ನಾವೇ ಅಂದುಕೊಳುತ  ಹೀಗೇ ಕಳೆದು ಹೋಗಲೇ  ಜಾಣ, ಆ ಸ್ನೇಹ ಸಲಿಗೆಯು?