“ಕಳೆದ” ಸ್ನೇಹ


ಹಿಂದೆ ಕಳೆದ ದಿನವ ನೆನೆದು 

ಇಂದು ನನ್ನ ನಾ ಕೇಳಿದೆ – 

ಎಂದು ಹೇಗೆ ಕಳೆದು ಹೋಯ್ತು 

ಸಂದ ಸ್ನೇಹ ಸಲಿಗೆಯು?


ಬಿಚ್ಚಿ ಮನದಿ ಮಾತನಾಡಿ 

ಹೃದಯದಾಳದಿಂದ ಬಂದ 

ಚಿಕ್ಕ ಮಾತಿಗೆಲ್ಲ ನಕ್ಕ

ಎಂದು ಹೇಗೆ ಕಳೆದು ಹೋಯ್ತು 

ಸಂದ ಸ್ನೇಹ ಸಲಿಗೆಯು?


ಮೌನ ಮುಳ್ಳು ಮನವ ಚುಚ್ಚಿ 

ಸಿಹಿಯ ಬಿಟ್ಟು ಕಹಿಯನುಂಡು 

ಎರಡು ದಡದಿ ನಿಂತು ನಾವು 

ನಡುವೆ ಕಾಲ ನದಿಯು ಹರಿದು 

ಎಂದು ಹೇಗೆ ಕಳೆದು ಹೋಯ್ತು 

ಸಂದ ಸ್ನೇಹ ಸಲಿಗೆಯು?


ತಿಳಿಯಲಿಲ್ಲ ಅರಿಯಲಿಲ್ಲ 

ಎಂದು ಸಂದು ಬಿರುಕು ಬಿಟ್ಟು 

ಬಿರುಕು ಇಂದು ಕಣಿವೆಯಾಗಿ 

ಇತ್ತ ನಾನು, ಅತ್ತ ನೀನು 

ಎಂದು ಹೇಗೆ ಕಳೆದು ಹೋಯ್ತು 

ಸಂದ ಸ್ನೇಹ ಸಲಿಗೆಯು?


ನನ್ನ ಬೆಟ್ಟದಲ್ಲಿ ನಾನು 

ನಿನ್ನ ಬೆಟ್ಟದಲ್ಲಿ ನೀನು 

ದೂರ ನೋಟದಲ್ಲಿ ಕಂಡು 

ಕೂಗಿಗೆಲ್ಲ ಪ್ರತಿಧ್ವನಿಯು 

ಎಂದು ಹೇಗೆ ಕಳೆದು ಹೋಯ್ತು 

ಸಂದ ಸ್ನೇಹ ಸಲಿಗೆಯು?


ಮರೆಯಲಿಲ್ಲ ಗೆಳೆಯ ನಿನ್ನ 

ನನ್ನ ನೀನೂ ಮರೆತೇ ಇಲ್ಲ 

ನನಗೂ ನಿನಗೂ ಬಿಡುವೇ ಇಲ್ಲ

ಎಂದು ನಾವೇ ಅಂದುಕೊಳುತ 

ಹೀಗೇ ಕಳೆದು ಹೋಗಲೇ 

ಜಾಣ, ಆ ಸ್ನೇಹ ಸಲಿಗೆಯು?

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನಸುಗಳು

ಉಗಾದಿ