ಹಿಮಗಿರಿ
ಅಚಲ ಬಂಡೆಯ ಬೆಟ್ಟ
ತಿಳಿ ಹೊದಿಕೆಯ ಮಂಜು।
ಜಾರು ನೀರಿಗೆ ಪ್ರಸವ
ಪರಿಸರದ ಪರಿಯು॥
ಎಲ್ಲಿಂದ ಬಂದಿಹಳೊ
ಎಲ್ಲಿಯ ನೀರನು ತಂದು।
ಎನಿತು ದೂರದಿ ತಾನು
ತಂದಿಹಳೊ ಇದ ಮೇಘ?
ಬಿದ್ದ ಹಿಮವದ ನೋಡು
ಗಿರಿರಾಜನಿಗೆ ಮುಕುಟ।
ಘನ ಅಂಬುದಿಂ ಭರಿತ
ತೊಯ್ದು ಪಟ್ಟಾಭಿಷಿಕ್ತ॥
ಎಂತಹ ಚಂಚಲೆ ಗಂಗೆ
ಮುಡಿಯಲಿರದೇ ತಾನು।
ಓಡಿ ಬರುವಳು ಕರಗಿ
ಹರಿದಿಳಿದು ತಾ ಜಾರಿ॥
ಯಾವ ತಪವಿದು ಏನೊ
ಕದಲದಾ - ಈ ಛಲವು
ಜಯಿಸಿ ಸುತ್ತೆಲ್ಲವನು
ಗಿರಿ ತಾನು ನಿಂತಿಹನು॥
ಗಿರಿಯ ತಪಸಿಗೆ ಇಂದು
ಜಾಣ ಶರಣೆಂದಿಹನು॥

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ