ವ್ಯಥೆ

 


 

ಬಂದದ್ದು ಒಬ್ಬೊಂಟಿಯಾಗಿ  ಭುವಿಗೆ

ತಿಳಿದಿಹುದು ಪೋಗುವೆ ಒಬ್ಬೊಂಟಿಗ ನಾನು

ನಾನಾರು ನಾನರಿಯೆಗುರಿಗೊತ್ತುಗಳೇನು?

ಕೆಲದಿನಗಳವನ ಹುಡುಕಿದೆ ನಾನು ವಿಸ್ಮಯದಿ

ಮಿಕ್ಕೆಲ್ಲ ದಿನವಾದವು ವ್ಯರ್ಥ ಕಾಲದ ಹರಣ

ಇದೆನ್ನ ವ್ಯಥೆಯ ಜೀವಿತದ ಕಥೆಯು॥೧॥


ನನ್ನ ದೇಹದ ದೇಗುಲದಿ ಅವನು ನೆಲೆಸಿಹನು

ನನ್ನಾಂತರ್ಯದಲಿ ರಾರಾಜಿಸುವವನು

ಮಬ್ಬಾದ ಕ್ಷೀಣಿಸಿದ ಕಣ್ಣುಗಳಿಗಿವ ಕಾಣಲಿಲ್ಲ

ಜೀವನದ ಕೊನೆಯುಸಿರು ಹತ್ತಿರವಾಗೆ

ಹಿಂದಿನದೇನು ಇಂದಿನ ಕಾರ್ಯಸಿದ್ಧಿಗೆ ಸಲ್ಲ

ಇದೆನ್ನ ವ್ಯಥೆಯ ಜೀವಿತದ ಕಥೆಯು॥೨॥


 ದೇವ ನೀ ಕಟುಕ ನೀ ಕುಹಕ ಸರಿಯೇ

ಹೋಳೆ ಹೊಳೆದು ಕಣ್ಣ ನೀ ಕಟ್ಟಿಸಿದೆ

ಮಾಯೆಯೊಳು ಒಡ್ಡಿ ಸಂತಸದಿ ನೀ ನಲಿದೆ

ಇದೊ ಬಂದೆಂದೆನುತ ಬರದೆ ಬರಿದಾಗಿಸಿದೆ

ಇದೆನ್ನ ವ್ಯಥೆಯ ಜೀವಿತದ ಕಥೆಯು॥೩॥


ಕಥೆಗೆ ಆರೋಹಣವು ಮೇಲೇರಿಸಿತು ಭಾವ

ಮೇಲೇರಿದ್ದು ತಂತಾನೆ ಕೆಳಗಿಳಿಯುತಿಹುದು

ಅವರೋಹಣವೇನು ಜೀವನದ ಕಥೆಗೆ

ಸಂಪೂರ್ಣವವೋ ಔಡವವೋ ತಿಳಿಯದೆಯೆ

ಇದುವೆ ಜಾಣನೆಂದೆನ್ನ ಕಥೆಯು॥೪॥


- ನಾ ಶ್ರೀ ಮೋ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾಲ

ಮರ

ಅಗಲಿಕೆ