ಕಿರುಬ - ಕರು - ತಾಯಿ
ಕಿರುಬನ ಬೇಟೆಗೆ ಬಿತ್ತು ಬಲಿಯು ಕಂದಮ್ಮ
ಆರ್ತನಾದವು ಹೊಮ್ಮಿತ್ತು “ ಓ ನನ್ನ ಅಮ್ಮ”।
ಕರುಳ ಕಿವಿಚುವ ನೋಟ ನೋಡೆ ಆ ತಾಯಿ
ಕಂದಂಗೆ ಬಿತ್ತು ಕಿರುಬ ಕೋರೆ ಬಾಯಿ॥
ತಿಳಿದಿದ್ದು ತನಗಾರು ಇಲ್ಲ ಬೆಂಗಾವಲು
ತಾಯಿ ಸ್ವೀಕರಿಸಿದಳು ಸ್ಥಿರದಿ ಸವಾಲು।
ಬಿಡಲಿಲ್ಲ ಸ್ಥಳವ ಮುನ್ನುಗ್ಗಿದಳು ತಾಯಿ
ಹೆದರಿಸಿ ಓಡಿಸಲೆಂದು ಆ ಕ್ರೂರ ಬಾಯಿ॥
ಒಬ್ಬಳೇ ಬಂದಳೆಂದು ಊಟಕ್ಕೆ ಭಂಗ
ವ್ಯಾಘ್ರವರಿತಿತ್ತು ಆ ತಾಯಿಯ ಅಂತರಂಗ।
ಬೇಗ ಹಿಮ್ಮೆಟ್ಟಿ ತಾ ಸರಿದನು ಅವಸರದಿ
ಕಾದಿದ್ದ ತಾಳ್ಮೆಯಿಂದಲಿ ಬರಲಿ ಸರದಿ॥
ಮೂಸಿ ನೋಡಿದಳವಳು ಅದ ಕರುಣೆಯಿಂದ
ಪ್ರಾಣ ಹೋಗುತಲಿತ್ತು ಕರು ದೇಹದಿಂದ।
ಹೇಳಲಾಗದ ನೋವ ತಾನು ಅನುಭವಿಸಿ
ಕೂಗ ಹಾಕಿದಳು ಬರಲು ಸ್ನೇಹಿತರ ಕರೆಸಿ॥
ಬಂದವು ಕೆಲ ತನ್ನ ಹಿಂಡು ಓಡೋಓಡಿ
ನುಗ್ಗಿದವು ಧೈರ್ಯದಿ ಮುಂದೆ ಎಲ್ಲ ತಾ ಭರದಿ।
ಕಾಲ ಮಿಂಚಿತ್ತೆಂದು ತೀರಿತ್ತು ಕರುವು
ತೋರಿದನಾ ಜಾಣ ತನ್ನಾಟವ ವಿಧಿಯು॥
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ