ಪರಿತಾಪ

 

An AI generated Image (NSM 30112024)

ನನ್ನ ಕಣ್ಣೀರಿರಲಿ ನನ್ನಾತ್ಮ ಶುದ್ದಿಗೆ
ಬರಿಯ ತೋರಿಕೆಯಲ್ಲ, ಅಂತರಾತ್ಮನ ಕೂಗು।
ಪರಿತಪಿಸಿ ಕೊರಗುತಿಹೆ, ಪಾಪಕ್ಕೆ ಪರಿಹಾರ
ನನ್ನ ಕಣ್ಣೀರಿರಲಿ ನನ್ನಾತ್ಮ ಶುದ್ಧಿಗೆ॥

ಬ್ರಾಹ್ಮಿಯಲಿ ನಾನೆದ್ದು, ಆಗಸವ ನೋಡಿದೆನು।
ನೋಡನೋಡುತಲೆದ್ದ ಉದಯ ರವಿಯು।
ಹಕ್ಕಿಗಳ ಸಂತಸದ ಸಂಭ್ರಮಕೆ ಸೋತಮನ
ನನ್ನ ಅರಿವಿಗೆ ಮೀರಿದೀ ಬಾಷ್ಪಗಳು।
ನನ್ನ ಕಣ್ಣೀರಿರಲಿ ನನ್ನಾತ್ಮ ಶುದ್ಧಿಗೆ॥

ಕೃತ ಹಲವು ಪಾಪಗಳು, ಹೇಳಲಾರದ ತಾಪ।
ನಿಜದಿ ಪರಿತಪಿಸುತಿರುವೆ, ಗತ ಕಾರ್ಯಕೆ।
ಅಳಿಯಲಾಗದು, ಅದಚ್ಚೊತ್ತಿ ಕೂತಿಹುದು
ಅದ ನೆನೆದು ಇಂದು ನಾ ತೊಳಿಯಲಿಚ್ಚಿಸಲು
ನನ್ನ ಕಣ್ಣೀರಿರಲಿ ನನ್ನಾತ್ಮ ಶುದ್ಧಿಗೆ॥

ಪರಬ್ರಹ್ಮನೆಡೆ ನಡೆಯುವುದ ನಾ ಮರೆತು।
ಮೆರೆದೆ ಮಿತಿಮೀರಿ ನಾನು ಎನ್ನಹಂಕಾರದಿ।
ಅದರ ಅರಿವು ಇಂದಾಗಿ ಕೊರಗಿ ಕರಗಿದ ಮನ
ಕರಗಿ ಕಣ್ಣೀರಾಗಿ ಈಗ ಹೊರ ಹೊಮ್ಮಿದೆ
ನನ್ನ ಕಣ್ಣೀರಿರಲಿ ನನ್ನಾತ್ಮ ಶುದ್ಧಿಗೆ॥

ಆತ್ಮಕ್ಕೇನು ಬಿಸಿ ಧಗೆಯು, ಅದಕೇನು ಶೀತೋಶ್ಣ?
ಅದಕೆಲ್ಲಿಯ ಕೊರಗು, ಸಂತಾಪ ಮೈಲಿಗೆಯು।
ಅದಕೆಲ್ಲಿಯ ಸುಖ ದುಃಖ, ಅದಕೇನು ಏರಿಳಿತ?
ಸಮಚಿತ್ತಕೆ ಹಾತೊರೆದು, ಹುಲುಬುತ್ತ ಹಂಬಲಿಸೆ
ನನ್ನ ಕಣ್ಣೀರಿರಲಿ ಜಾಣ ಮನ ಶುದ್ಧಿಗೆ॥

- ನಾ ಶ್ರೀ ಮೋ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ