ಮುಂಗಾರಿ
ಶುಭ್ರ ನೀಲಿ ನಭಕೆ ದೃಷ್ಠಿ ಬೊಟ್ಟಿಟ್ಟಂತೆ
ಮುಂಗಾರಿನ ಮುಂಗುರುಳುಗಳು
ಕಪ್ಪು ಕಾರ್ಮೋಡಗಳು।
ಕಾದ ಭುವಿಗೆ ಮೇಘ ಸಂದೇಶ,
ಕಾದು ಬಾಯ್ತೆರೆದ ಚಾತಕದ ಆಶಾ
ಮುಂಗಾರಿನ ಮುನ್ನ ಮಳೆ॥
ಬಾಯಾರಿದಗೆ ಬಾಯ್ತೆರೆದು ಬಯಸುತ್ತ
ಬಳಲಿ ಬೆಂದವಗೆ, ತುಂಬಿದಾ ಬಿಂದಿಗೆಯು।
ಹೊರಗೋಡುವಾಸೆ, ಮಿಂದು ತೊಯುವಾಸೆ।
ಮೊದಮೊದಲ ಉಗುಳು, ಮಳೆಯ ತುಂತುರುಗಳು
ಮುತ್ತಿನ ಮಳೆ, ಸಿಹಿ ಸಿರಿಯ ಸಿಂಚನ
ಮುಂಗಾರಿನ ಮುನ್ನ ಮಳೆ॥
ಮೊದಲ ಮಳೆಯ ಮಣ್ಣಿನ ಪರಿಮಳ
ಆಹಾ ಧೀರ್ಗಾಗ್ರಹಣ, ನಾಸಿಕಗೆ ಔತಣ।
ಒಣಿಗದಾ ನಲ, ಪವಾಡಗಳಿಗೆ ಸುಗ್ಗಿ
ಎಲ್ಲಿದ್ದವೋ ಹಿರಣ್ಯಗರ್ಭದೊಳು ಅಡಗಿ
ಜೀವತಾಳಿದವು, ಚಿಗುರೊಡೆದು ಜೀವರಾಶಿ
ಮುಂಗಾರಿನ ಮುನ್ನ ಮಳೆ॥
ಅದೇನಾರ್ಭಟ, ಬಾಣ ಬಿರುಸಿನ ನೋಟ।
ಮಳೆರಾಯನ ಬರುವಿಕೆಗೆ ಬಹುಪರಾಕುಗಳು।
ದುಂಧುಬಿ, ನಗಾರಿಗಳ ಗಡುಗಿನ ಮದ್ದಾಳೆ।
ನೆಲ ಗುಡಿಸಿ, ಕಸವ ತೆಗೆವ ಬಿರುಗಾಳಿಯ ಸಾಹಸ
ಎಂತಹ ಸಂಭ್ರಮ ಜಾಣ ಮುಂಗಾರಿನ ಮುನ್ನಾನಂದ
ಮುಂಗಾರಿನ ಮುನ್ನ ಮಳೆ॥
- ನಾ ಶ್ರೀ ಮ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ