ಅಮ್ಮ
ಅಮ್ಮ
ಎಲ್ಲಿ ಕಳೆದು ಹೋದವೋ
ಆ ಕಳೆದ ದಿನಗಳು
ಮರುಕಳಿಸಿ ಬಾರದೇಕೊ
ಆ ಸಿಹಿಯ ಕ್ಷಣಗಳು
ಅಮ್ಮ ಎಂಬ ಕೂಗಿಗಾಕೆ
ಓಡನೆ ಓಡಿ ಬರುವಳು
ಬಂದು ಅಪ್ಪಿಹಿಡಿದು ಆಕೆ
ತನ್ನೊಲವನು ತೋರ್ವಳು
ಎಣ್ಣೆ ಶಾಸ್ತ್ರ, ಶುಭ ಹಾರೈಕೆ
ಹಬ್ಬ ಹರಿದಿನಗಳಲ್ಲಿ ಖಚಿತ
ಬಣ್ಣ ಬಟ್ಟೆ ತಿನಿಸುಗಳಾ
ಪೂರೈಕೆಯಲ್ಲಿ ಮನ, ಕಾಯಕ
ನಿದ್ದೆ ಬರಲೆಂದು ತಟ್ಟಿ ಮತ್ತೆ
ತಟ್ಟೆಬ್ಬಿಸುತ್ತಿದ್ದಳು
ತಲೆಯ ಕೂದಲ ಕೆದರಿ ಮತ್ತೆ
ತೀಡಿ ಬಾಚುತ್ತಿದ್ದಳು
ಮೊದಲ ಗುರುವು, ಪಾಠ ಹೇಳಿ,
ಮಗ್ಗಿ ಕಲಿಸುತ್ತಿದ್ದಳು
ಹುಸಿಯ ಕೋಪತೋರಿ
ಮತ್ತೆನ್ನ ರಮಿಸುತ್ತಿದ್ದಳು
ಇಟ್ಟ ರಕ್ಷೆ ನನಗೆ ಕವಚ
ನಿನ್ನ ಆಶಿರ್ವಚನವು
ನಿನ್ನ ತುತ್ತು ತಿಂದ ನಾನು
ನಿನ್ನ ಋಣಿಯು ಎಂದಿಗೂ
ಅಮ್ಮ ನೀನಿಲ್ಲವೆಂಬ
ಕಹಿಯ ನೋವು ಬಿಟ್ಟೆಯಾ?
ನಿನ್ನ ಕಂದ, ನಾನು ನಲಿಯೆ
ಸಂತಸದೊಳು ಭಾಗಿಯಾಗೆಯಾ?
ಇಂದೇಕೋ ಕಾಡಿ ಬಂತು
ನಿನ್ನ ನೆನಪು ಒಮ್ಮೆಗೆ
ಕಣ್ಣು ತುಂಬಿಬಂತು ಏಕೊ
ಬರಿದಾಯಿತು ಹೃದಯದಾಳದಿ
ಎಲ್ಲಿ ಕಳೆದು ಹೋದವೋ
ಆ ಕಳೆದ ದಿನಗಳು
ಮರುಕಳಿಸಿ ಬಾರದೇಕೊ
ಆ ಸಿಹಿಯ ಕ್ಷಣಗಳು
- ನಾ ಶ್ರೀ ಮೋ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ