ಫೋಟೋ
ಹಳೆಯ ಫೋಟೋ ನೋಡುತ್ತಿದ್ದೆ
ಬಾಲ್ಯ, ಹರಯ, ಯೌವನಗಳ
ಹಳೆಯ ಫೋಟೋ ನೋಡುತ್ತಿದ್ದೆ॥
ಫೋಟೋದಲ್ಲಿನ ಆ ಕಣ್ಗಳು
ಅದೆಶ್ಟು ಹೊಳಪು ಅದೆಂತಹ ನಗು।
ಕಪಟವಿಲ್ಲದ ಮುಗ್ಧತೆಯು
ಹಳೆಯ ಫೋಟೋ ನೋಡುತ್ತಿದ್ದೆ॥
ನೋಡಿದೆ ನಾನು ನಲಿವ ಬಾಲ್ಯವ
ತುಂಟ ನಗುವು ಹುರುಪು ಬಹಳ।
ಫ್ರೇಮಿನಿಂದಾಚೆ ಜಿಗಿದುಬಿಡುವ
ಹಳೆಯ ಫೋಟೋ ನೋಡುತ್ತಿದ್ದೆ॥
ಚಿಗುರು ಮೀಸೆ ಅಛಲ ಛಲವು
ದಿಟ್ಟತನದ ಯುವಕನೊಬ್ಬ।
ಕ್ಯಾಮರವನ್ನೇ ಸುಡುವಂತಿದ್ದ
ಹಳೆಯ ಫೋಟೋ ನೋಡುತ್ತಿದ್ದೆ॥
ನೋಡ ನೋಡುತ್ತ ನಿಟ್ಟುಸಿರ ಬಿಟ್ಟೆ
ಕನ್ನಡಕವ ಸರಿಸಿ ತೆಗೆದೆ।
ಒರೆಸಿ ಮತ್ತೆ ತಗುಲಿಹಾಕಿದೆ
ಈಗೆಲ್ಲ ಸುತ್ತ ಬಹಳ ಸ್ಪಷ್ಟ॥
ನನ್ನ ಎದುರು ಕನ್ನಡಿಯೊಂದು
ನಾನದನು ನೋಡಿರಲಿಲ್ಲ।
ತಟ್ಟನೆ ಕಂಡಿತೊಂದು ಮುದಿ ಮುಖವು
ಬೆಚ್ಚಿ ಬಿದ್ದು ನೋಡಿದೆ ಅವನ॥
ಅವನೆ ನಾನೆಂದು ತಿಳಿದೊಡೆ
ನೋಡಿದೆ ನಾ ಚದುರಿದಾ ಪಟಗಳ।
ಹರಿದು ಹೋದ ಬಾಲ್ಯ, ಹರಯ, ಯೌವನಗಳ
ಹಳೆಯ ಫೋಟೋ ನೋಡುತ್ತಿದ್ದೆ॥
- ನಾ ಶ್ರೀ ಮೋ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ