ಸ್ನೇಹ
ನಾನಿತ್ತ ನೀವತ್ತ ಪರಿಚಿತರೇನು ಅಲ್ಲ
ಹಾಗೇ ಕಾಲಕಳೆಯಲೆಂದು ಪ್ರಾರಂಭಿಸಿದ್ದು
ಉಭಯಕುಶಲೋಪರಿ ಪರಿ ಪರಿಯ ಮಾತುಗಳು
ನನ್ನ ನೀವು, ನಿಮ್ಮನು ನಾನು ಮತ್ತೆ ಸಂಧಿಸುವ ಸಂ
ಧರ್ಭವಿಲ್ಲವೆಂದು
ನನ್ನ ಪ್ರಲಾಪಕ್ಕೆ ಸೈ ಹೇಳುತ್ತ ಬಂದ ಹಾಸ್ಯ ಕಲಾಪ
ಹೌದು ನಾವಿಬ್ಬರೂ ಸ್ನೇಹಿತರು
ಈ ಪಯಣದಲಿ ಒಬ್ಬರಿಗೊಬ್ಬ ಹಿತಚಿಂತಕರು
ವ್ಯಾವಹಾರಿಕವಾಯಿತೆ ನಮ್ಮೀ ಸ್ನೇಹ?
ಶಾಲೆಯಲ್ಲಿ ಒಡನಾಡಿದವರು ಬಹುವರುಷಗಳದ್ದು
ನನ್ನ ಪಕ್ಕ ನೀನು ನಿನ್ನ ಪಕ್ಕ ನಾನು ಚಡ್ಡೀದೋಸ್ತುಗಳು
ಸಹಪಾಟಿಯಾಗಿ ಆಟೋಟಗಳಲ್ಲಿ ಪೈಪೋಟಿಯಾಗಿ
ಗೆದ್ದರೂ ಸೋತಂತೆ, ಸೋತರೂ ಗೆದ್ದಂತಾಡಿದವರು
ನನ್ನನೀ ನಿನ್ನನು ನಾನು ಅಗಲುವುದಿಲ್ಲವೆಂದು ಆಣೆಯಿಟ್ಟವರು
ಹೌದು ನಾವಿಬ್ಬರೂ ಸ್ನೇಹಿತರು
ಆಟ ಪಾಠಗಳಲ್ಲಿ ಸಮಭಾಗಿಗಳು
ವ್ಯಾವಹಾರಿಕವಾಯಿತೆ ನಮ್ಮೀ ಸ್ನೇಹ?
ದುಡಿತ ಕೆಲಸಗಳ ಹೊಟ್ಟೆಹೊರೆಯುವ ಕಾಲ
ನನ್ನ ಮೇಜಿನ ಪಕ್ಕ ನಿನ್ನ ಮೇಜು
ಬಾಸ್ ಇತರರ ಬಗೆಗೆ ಆಡಿ ನಕ್ಕ ಆ ಮೋಜು
ಪ್ರಮೋಶನ್ ಇಂಕ್ರಿಮೆಂಟುಗಳ ಚರ್ಚೆ
ಪಿಕ್ನಿಕ್ ಸೆಮಿನಾರುಗಳಲ್ಲೂ ಓಡಾಟ
ಹೌದು ನಾವಿಬ್ಬರೂ ಸ್ನೇಹಿತರು
ಕಾಯಕ ದುಡಿಮೆಗಳಲ್ಲಿ ಪೈಪೊಟಿಗಳು
ವ್ಯಾವಹಾರಿಕವಾಯಿತೆ ನಮ್ಮೀ ಸ್ನೇಹ?
ಸಂಧಿಸಿದೆವು ಓಡನಾಡಿದೆವು ಬಹುವರುಷ
ಹವ್ಯಾಸಗಳು ಒಂದೇ ಚಿಂತನೆಯು ಒಂದೇ
ಒಮ್ಮೊಮ್ಮೆ ಭಿನ್ನಾಭಿಪ್ರಾಯವಿದ್ದರೂ ಸರಿಯೆ
ಚರ್ಚಿಸಿ ಸಮಾಲೋಚಿಸಿ ಮುನ್ನಡೆಯುತ್ತಿದ್ದೆವು
ಸಮಾನಮನಸ್ಕರು ಅಲ್ಲವೆ ನಾವು
ಹೌದು ನಾವಿಬ್ಬರೂ ಸ್ನೇಹಿತರು
ಹವ್ಯಾಸ ಚಿಂತನೆಯಲಿ ಸಾಮ್ಯ ಉಳ್ಳವರು
ವ್ಯಾವಹಾರಿಕವಾಯಿತೆ ನಮ್ಮೀ ಸ್ನೇಹ?
ಸುಖ ದುಃಖ ಹಂಚಿಕೊಂಡವರು ಬಹುಚಿಕ್ಕಂದಿನಿಂದ
ನಿನ್ನ ಕಷ್ಟಕ್ಕಾದವನು ನಾನು ನನ್ನ ಸಂತಸದಿ ಒಂದಾದವನು ನೀನು
ನಿನ್ನ ಬುಜದ ಮೇಲತ್ತವನು ನಾನು, ನಿನಗೆ ಬುಜವ ಕೊಟ್ಟವ ನಾನು
ಸಂತಸದಿ ಕೂಡಿ ನಲಿದವರು ನಾವು
ಹೌದು ನಾವಿಬ್ಬರೂ ಸ್ನೇಹಿತರು
ಒಬ್ಬರಿಗೊಬ್ಬರಾದವರು
ವ್ಯಾವಹಾರಿಕವಾಯಿತೆ ನಮ್ಮೀ ಸ್ನೇಹ?
ಸ್ನೇಹ ಕೊಟ್ಟು ತಗೆದುಕೊಳ್ಳುವ ವ್ಯಾಪಾರ ವ್ಯವಹಾರಗಳಲ್ಲ
ಅದೊಂದು ಅಳೆಯಲಾಗದ ಬಣ್ಣಿಸಲಾಗದ ಸಂಬಂಧ
ರೂಪವಿಟ್ಟು, ಲೆಕ್ಕ ಕೊಟ್ಟು, ಚಿತ್ರಿಸುವ, ಎಣಿಸುವ ತವಕವೇಕೆ?
ಹೌದು ನಾವಿಬ್ಬರೂ ಸ್ನೇಹಿತರು
ಇದಕ್ಕೆ ಸಮಜಾಯಿಸಿ ಬೇಡ
ವ್ಯವಹಾರವಲ್ಲ ನಮ್ಮೀ ಸ್ನೇಹ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ