ಮರ
Click here for audio recitation 🔊 ಮರವಾಗಿ ಇರಬೇಕು ನಾನು ಈ ಧರೆಯೊಳಗೆ ಚಂದದ ತರುವಿನಿಂಜೀವನದ ಅರಿವಾಗೆ ಮರವಾಗಿರ ಬೇಕು ನಾನು ಈ ಧರೆಯೊಳಗೆ॥ ಆಳ ಆಳಕೆ ಹೊಕ್ಕಿ ಧರಣಿಯೊಳು ಧೃಡವಾಗಿ ಹರಡಿ ಈ ಭುವಿಯೊಳಗೆ ಭದ್ರ ಬುನಾದಿಯೆನಿಪ। ಬಲು ಹಳೆಯ ಕಾಣದಾ ಬೇರನು ನಾ ಹೊಂದಿ ಮರವಾಗಿರಬೇಕು ನಾನು ಈ ಧರೆಯೊಳಗೆ॥ ಮೇಲ್ಮೇಲಕೆ ಏರಿ ಗಗನದಲಿ ವಿಸ್ತರಿಸಿ ಚಾಮರದಂತೆ ಚಾಚಿ ದಿಕ್ಕುಗಳ ದಿಕ್ಕರಿಪ। ಹಚ್ಚ ಪಚ್ಚೆಯ ಹುರುಪ ತೋರುವ ಮರವಾಗಿರಬೇಕು ನಾನು ಈ ಧರೆಯೊಳಗೆ॥ ಥಕ ಥೈಯೆಂದು ತಂಗಾಳಿಯಲಿ ನೃತ್ಯವನಾಡಿ ಬಿರುಗಾಳಿಯಲಿ ಧೃತಿಗೆಡದೆ ಛಲದಿನಿಂತಿರ್ಪ। ಸದೃಡ ಸಶಕ್ತ ಕೊಂಬೆ ಖಾಂಡಗಳುಲ್ಲ ಮರವಾಗಿರಬೇಕು ನಾನು ಈ ಧರೆಯೊಳಗೆ॥ ಚಿಲಿ ಪಿಲಿ ಹಕ್ಕಿಗಳ ಗೂಡಿಗಾಶ್ರಯವಾಗಿ ಹರಡಿ ಛಾಯೆಯ ಚೆಲ್ಲಿ ಪಯಣಿಗಗೆ ತಣಿಪ। ದಾರಿಯಲಿ ಗುರುತಾಗಿ ಸುತ್ತ ಕಟ್ಟೆಯನಿಟ್ಟ ಮರವಾಗಿರ ಬೇಕು ನಾನು ಈ ಧರೆಯೊಳಗೆ॥ ಮುದದಿ ಒಂದು ದಿನ ಮುಂದೊಮ್ಮೆ ಮುದಿಯಾಗಿ ಹೇಗಾದರೂ ಸರಿಯೆ ಇತರರಿಗೆ ಆಸೆಯ ಮಣಿಪ। ಒಲೆ ಉರುವಲು ಆಗಿ, ಮನೆಯ ಪೀಠೋಪಕರಣವೆಯಾಗಿ ಮರವಾಗಿರ ಇದ್ದಿರಬೇಕು ಜಾಣ ಈ ಧರೆಯೊಳಗೆ॥